
ಅರೆ ಗಳಿಗೆ ಕಿಟಕಿಗೊರಗಿ
ನಿಂತಾಗೆಲ್ಲಾ…
ಬೆಳಕ ತಡೆದು ಕಣ್ಣಿಗವಚುತ್ತದೆ,
ಆ ಹಳದಿ ಪರದೆ!!
ನೆಲದ ಮರಳ ನುಂಗಿ
ಹರಿವ ಝರಿಯ ಸಾಗಿ
ಹಾಯಿ ದೋಣಿಯೊಡಲ
ಹೊತ್ತೊಯ್ವ ತೊರೆಯ ತೆರೆಯಂತೆ…
ತೋರುತ್ತದೆ ಸದಾ,
ಆ ಹಳದಿ ಪರದೆ!!
ನಟನೆಗೆ ನಗುವಾಗಿ
ಪಿಸು ಮಾತಿಗೆ ಕಿವಿಯಾಗಿ
ಸೆಳೆಯಲೆಂದೆ ಬಣ್ಣದ ನವಿಲು
ಮಳೆ ಮೋಡ ನೋಡಿ ಕುಣಿವಂತೆ...
ಕುಣಿಯುತ್ತದೆ ಸದಾ,
ಆ ಹಳದಿ ಪರದೆ!!
ಗುನುಗುವ ಹಾಡಾಗಿ
ಬೆರಳಡಿಯ ತೊಗಲು ಗೊಂಬೆಯಂತಾಗಿ
ಆಟ ಬೇಸರಿಸೆ ಸೂತ್ರವನರಿದು ಇರಿಸಿದಂತೆ…
ಕಾಡಿಸುತ್ತದೆ ಸದಾ,
ಆ ಹಳದಿ ಪರದೆ!!
ಮುಚ್ಚಿಡಲು ಮುದುಡಿದಂತಾಗಿ
ಬಿಚ್ಚಿದಂತೆಲ್ಲಾ ಸುಕ್ಕುಗಳ ಸೊಕ್ಕಾಗಿ
ಇಳಿದರೂ ತಳ ಮುಟ್ಟದ ನೆಳಲಂತೆ…
ಮಿಸುಕಾಡುತ್ತದೆ ಸದಾ,
ಆ ಹಳದಿ ಪರದೆ!!
ಕತ್ತಲೆಗೆ ಕಾದ ಹಗಲಾಗಿ
ಬೆಳಕಿಗೆ ಬೆಚ್ಚಿದ ಇರುಳಾಗಿ
ಸರಕ ಸುಳಿ ಹೊತ್ತ ಹುಸಿ ಕನಸಂತೆ…
ನಟಿಸುತ್ತಲೇ ಇರುತ್ತದೆ,
ಆ ಹಳದಿ ಪರದೆ!!