ಬದುಕೂ…ಹೂವೂ!!

ಮಂಜುಳ💧ಇಬ್ಬನಿ

ಪ್ರತಿ ಹಗಲಿನ
ನೆರಳಲ್ಲೆ ಸರದಿ
ಇರುಳಿನ ಸಾವಾಗುತ್ತದೆ!

ಪ್ರತಿ ನಗುವಿನ
ಮರೆಯಲ್ಲೇ ಅದೆಷ್ಟೋ
ನೋವಿನ ಜನನವಾಗುತ್ತವೆ!

ಪ್ರತಿ ಮುಗ್ಧತೆಯ
ಹೆರಳಿಗೆ ಹಸಿ
ಮೋಸವೇ ಉರುಳಾಗುತ್ತದೆ!

ಪ್ರತಿ ಸೋಲಿನ
ಗಂಟಲ್ಲೆ ಕನಸುಗಳು
ಬಿಡಿಸದ ಒಗಟಾಗುತ್ತವೆ!

ಪ್ರತಿ ಹೆಜ್ಜೆಯ
ಸದ್ದಲ್ಲೆ ಕಾಣದ
ದಾರಿಗಳು ಜೊತೆಯಾಗುತ್ತವೆ!

ಪ್ರತಿ ನಿಮಿಷಗಳ
ಮುಳ್ಳಲ್ಲೆ ಸಮಯವು
ಸಂಯಮದ ಗೂಡಾಗುತ್ತದೆ!

ಪ್ರತಿ ಉಸಿರಿನ
ದೆಸೆಯಲ್ಲೆ ಗೊತ್ತಿರದ
ಮುಂಜಾನೆ ನಾಳೆಗಳಾಗುತ್ತವೆ!

ಪ್ರತಿ ಬದುಕೂ
ಅನಿವಾರ್ಯತೆಗೆ ಸಿಲುಕಿ
ನಗುವ, ನಲುಗುವ ಹೂವಾಗುತ್ತದೆ!!

ಹಳದಿ ಪರದೆ

ಮಂಜುಳ💧ಇಬ್ಬನಿ

ಅರೆ ಗಳಿಗೆ ಕಿಟಕಿಗೊರಗಿ
ನಿಂತಾಗೆಲ್ಲಾ…
ಬೆಳಕ ತಡೆದು ಕಣ್ಣಿಗವಚುತ್ತದೆ,
ಆ ಹಳದಿ ಪರದೆ!!

ನೆಲದ ಮರಳ ನುಂಗಿ
ಹರಿವ ಝರಿಯ ಸಾಗಿ
ಹಾಯಿ ದೋಣಿಯೊಡಲ
ಹೊತ್ತೊಯ್ವ ತೊರೆಯ ತೆರೆಯಂತೆ…
ತೋರುತ್ತದೆ ಸದಾ,
ಆ ಹಳದಿ ಪರದೆ!!

ನಟನೆಗೆ ನಗುವಾಗಿ
ಪಿಸು ಮಾತಿಗೆ ಕಿವಿಯಾಗಿ
ಸೆಳೆಯಲೆಂದೆ ಬಣ್ಣದ ನವಿಲು
ಮಳೆ ಮೋಡ ನೋಡಿ ಕುಣಿವಂತೆ‌.‌..
ಕುಣಿಯುತ್ತದೆ ಸದಾ,
ಆ ಹಳದಿ ಪರದೆ!!

ಗುನುಗುವ ಹಾಡಾಗಿ
ಬೆರಳಡಿಯ ತೊಗಲು ಗೊಂಬೆಯಂತಾಗಿ
ಆಟ ಬೇಸರಿಸೆ ಸೂತ್ರವನರಿದು ಇರಿಸಿದಂತೆ…
ಕಾಡಿಸುತ್ತದೆ ಸದಾ,
ಆ ಹಳದಿ ಪರದೆ!!

ಮುಚ್ಚಿಡಲು ಮುದುಡಿದಂತಾಗಿ
ಬಿಚ್ಚಿದಂತೆಲ್ಲಾ ಸುಕ್ಕುಗಳ ಸೊಕ್ಕಾಗಿ
ಇಳಿದರೂ ತಳ ಮುಟ್ಟದ ನೆಳಲಂತೆ…
ಮಿಸುಕಾಡುತ್ತದೆ ಸದಾ,
ಆ ಹಳದಿ ಪರದೆ!!

ಕತ್ತಲೆಗೆ ಕಾದ ಹಗಲಾಗಿ
ಬೆಳಕಿಗೆ ಬೆಚ್ಚಿದ ಇರುಳಾಗಿ
ಸರಕ ಸುಳಿ ಹೊತ್ತ ಹುಸಿ ಕನಸಂತೆ…
ನಟಿಸುತ್ತಲೇ ಇರುತ್ತದೆ,
ಆ ಹಳದಿ ಪರದೆ!!

ಕತ್ತಲೆಯ ಕಾವು

ಮಂಜುಳ💧ಇಬ್ಬನಿ

ಬಹಳ ದೂರ ಸಾಗಲಿಲ್ಲ
ಸವಕಲು ಮಾತೇತಕೋ…
ಹಾದಿ ತಪ್ಪಿ ಕರಗಿ ಹೋಯ್ತು
ಕಾಳಜಿಯ ಕರಿ ಮೋಡವು!!

ಹಮ್ಮು ಬಿಮ್ಮು ಗೋಡೆ ನಡುವೆ
ಉಸಿರುಗಟ್ಟಿದಂತಿದೆ…
ಅಂಕೆ ಶಂಕೆ ನೆರಳು ಕಾಡಿ
ಕತ್ತಲೆಗೂ ಕಾವು ಹೆಚ್ಚಿದೆ!!

ಹೆಜ್ಜೆಗಳೂ ಭಾರವಾಗೆ
ಬರಿದೆ ದಾರಿ ಕೂಗಿದೆ…
ಬೀಸುವೆಡೆಗೆ ಗಾಳಿ ಕೂಡಿ
ಎತ್ತೆತ್ತಲೋ  ಸಾಗಿದೆ!!

ಮಾತ ಬಸಿದು ಮೌನ ಮೆರೆದೆ
ಮನವು ದಣಿದು ಸೋತಿದೆ
ನೆನಪ ಸರಿಸಿ ಕನಸ ಸುರಿಸು
ಕತ್ತಲೆಯ ಹಾಯ್ದು ಸಾಗಬೇಕಿದೆ!!

ತಾಳ್ಮೆ ತಾಯೆ ಮಡಿಲ ತಾರೆ
ಕನವರಿಕೆಯು ಕದ ತಟ್ಟಿದೆ
ಬಿಗಿದಪ್ಪಿ, ನೆತ್ತಿ ಸವರು
ಚಿರ ನಿದ್ರೆ ಬೇಕಿದೆ ಕಣ್ಣಿಗೆ!!!